ಸ್ವತಂತ್ರ್ಯ ತಂತ್ರಾಂಶ ಆಂದೋಲನ,ಕರ್ನಾಟಕ.

ಸರ್ವ ಸದಸ್ಯರ ಸಭೆ: ೦೭-೦೫-೨೦೧೧

            ಮುಕ್ತ ಹಾಗು ಸ್ವತಂತ್ರ್ಯ ತಂತ್ರಾಂಶ ಪ್ರತಿಷ್ಠಾನ ಇಂಡಿಯಾದ ಕಾರ್ಯವೈಖರಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಸ್ವತಂತ್ರ್ಯ ತಂತ್ರಾಂಶ ಕ್ರಾಂತಿ, ಕರ್ನಾಟಕ. ’ಭಾರತ ಸೊಸೈಟೀಸ್ ಆಕ್ಟ್’ ಅಡಿಯಲ್ಲಿ ನೋಂದಿತವಾಗಿರುವ ಈ ಸಂಸ್ಥೆಯು ತನ್ನ ಸರ್ವ ಸದಸ್ಯರ ಸಭೆಯನ್ನು ೦೭-೦೫-೨೦೧೧ ರಂದು, ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಳಿ ಇರುವ ತನ್ನ ಕಚೇರಿಯಲ್ಲಿ ಆಯೊಜಿಸಿತ್ತು. ಈ ಹಿಂದೆ ನಡೆಸಿದ ಕಾರ್ಯಕ್ರಮಗಳ ಸ್ವಯಂದರ್ಶನ ಮತ್ತು ಮುಂದಾಗಬೇಕಾದ ಕಾರ್ಯಕ್ರಮಗಳನ್ನು ಸರ್ವ ಸದಸ್ಯರ ಸಭೆಯ ಮುಂದಿಟ್ಟು, ಈ ಸಂಸ್ಥೆಗೆ ಅತ್ಯಗತ್ಯವಾಗಿದ್ದ ವ್ಯವಸ್ಥಿತ ಪದಕ್ರಮವನ್ನು ಕಾರ್ಯರೂಪಕ್ಕೆ ತರಬೇಕೆಂಬ ಕಾರ್ಯಕಲಾಪ ಈ ಸಭೆಯದಾಗಿತ್ತು.

            ಈ ಕರ್ಯಕ್ರಮದ ಅಧ್ಯಕ್ಷತೆಯನ್ನು ಡಾ   ಚಿದಾನಂದಗೌಡರು ವಹಿಸಿಕೊಂಡಿದ್ದರು. ಡಾ   ಚಿದಾನಂದಗೌಡರು ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ.  ರಾಷ್ರಕವಿ ಕುವೆಂಪುರವರ ಅಳಿಯರಾದ ಶ್ರೀಯುತರು ಮೈಸೂರಿನಲ್ಲಿ ನೆಲೆಸಿದ್ದು, ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ಅತಿ ಸಂತಸದ ವಿಷಯವಾಗಿತ್ತು. ನೂತನ ಕಚೇರಿಯ ಉದ್ಘಾಟನೆಯನ್ನು ಪೂರೈಸಿದ ಡಾ   ಚಿದಾನಂದಗೌಡರು ನಂತರ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಸಂಯೋಜಕರಾಗಿ ಕಾರ್ಯನಿರ್ವೈಸುತ್ತಿದ್ದ ಶ್ರೀ   ಸೆಂಥಿಲ್ ಅವರು ನೆರೆದಿದ್ದ ಗಣ್ಯರ ಪರಿಚಯ ಮಾಡಿಕೊಟ್ಟರು.
            ಇದಾದ ನಂತರ ಶ್ರೀಯುತ ಡಾ   ಚಿದಾನಂದಗೌಡರು ನೆರೆದಿದ್ದ ಎಲ್ಲಾ ಸದಸ್ಯರನ್ನು ಕುರಿತು ಮಾತನಾಡಿದರು. ಸರ್ಕಾರದಿಂದ ಆಗಬೇಕಿದ್ದ ಮುಕ್ತ ಹಾಗು ಸ್ವತಂತ್ರ್ಯ ತಂತ್ರಾಂಶ ಪರ ಕಾರ್ಯಕ್ರಮಗಳು, ಶೈಕ್ಷಣಿಕ ಸಂಸ್ಥೆಗಳಿಂದಾಗಬಹುದಾದ ಸಹಾಯ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ಮೂಡಬೇಕಾಗಿರುವ ಅರಿವು ಇನ್ನಿತರ ವಿಷಯಗಳ ಬಗ್ಗೆ ಧೀರ್ಘವಾಗಿ ಮಾತನಾಡಿದರು. ನಂತರ ಶ್ರೀ ಸೆಂಥಿಲ್ ಅವರು ಸಂಸ್ಥೆಯಿಂದ ಇಲ್ಲಿಯವರೆಗು ಆಯೋಜಿತವಾಗಿದ್ದ ಎಲ್ಲಾ ಕಾರ್ಯಕ್ರಮಗಳ ಪರಿಚಯ ಮಾಡಿಕೊಟ್ಟರು. ಈ ಎಲ್ಲಾ ಕಾರ್ಯಕ್ರಮಗಳ ಸಾರಥ್ಯ ವಹಿಸಿದ್ದ ಸದಸ್ಯವರ್ಗದವರು ತಮ್ಮ ಕಾರ್ಯಕ್ರಮಗಳ ವಿಸ್ತ್ರುತ ವಿವರಣೆ ಕೊಟ್ಟರು. ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀ ಜಯಕುಮಾರ್ ಅವರು ಸಂಸ್ಥೆಯ ಹಣಕಾಸಿನ ಲೆಕ್ಕಾಚಾರ-ವೆಚ್ಚ ವಿನಿಯೋಗಗಳ ವಿವರಣೆ ಕೊಟ್ಟರು.
             ವಿಶೇಷ ಅಥಿಥಿಗಳಾಗಿ ಆಗಮಿಸಿದ್ದ ’ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ತ್ರೋನೊಮಿ’ ಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ   ಛಟರ್ಜೀ ಅವರು ಕಚೇರಿ ಆವರಣದ ಸದುಪಯೋಗ, ಸುತ್ತ-ಮುತ್ತಲಿನ ಜನಾಂಗದವರಲ್ಲಿ ಈ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮೂಡಬೇಕಾಗಿರುವ ಅರಿವು ಹಾಗು ಡಾ   ಅಂಬೇಡ್ಕರ್ ಕಮ್ಯುನಿಟಿ ಕಂಪ್ಯೂಟಿಂಗ್ ಸೆಂಟರ್ ಗಳ ಸ್ಥಳೀಯ  ಪ್ರಾತಿನಿಧ್ಯದ ಅವಷ್ಯಕತೆ ಮುಂತಾದ ಮಹತ್ವದ ಅಂಶಗಳ ಬಗ್ಗೆ ವಿವರಣೆ ನೀಡಿದರು.
             ಈ ಸಂಸ್ಥೆಯಿಂದ ಆಗಬೇಕಾದ ಮುಂದಿನ ಕಾರ್ಯಕ್ರಮಗಳನ್ನು ಉತ್ತಮ ಕಾರ್ಯರೂಪಕ್ಕೆ ತರಲು ಸಹಾಯವಾಗಲು ಹಾಗು ವ್ಯವಸ್ಥಿತ ನಿರ್ದೇಶನಕ್ಕೆ ಅನುಕೂಲವಾಗಲು ೧೪ ಸದಸ್ಯರ ಕಾರ್ಯಾಂಗ ಸಮಿತಿಯನ್ನು ಆಯೋಜಿಸಲಾಯಿತು. ಈ ಸಂಸ್ಥೆಯ ಅಧ್ಯಕ್ಷರಾಗಿ ಇಂಡಿಯನ್ ಇಂಸ್ಟಿಟ್ಯೂಟ್ ಆಫ್ ಸೈನ್ಸ್ ಅಲ್ಲಿನ ಗಣಕಯಂತ್ರ ತಂತ್ರಜ್ಞಾನ ಇಲಾಖೆಯ ಪ್ರೋ   ಗೋಪೀನಾಥ್ ರವರನ್ನು ಆಯ್ಕೆಮಾಡಲಾಯಿತು.  ಈ ಸಮಿತಿಯಿಂದಲೇ ಒಬ್ಬ ಕಾರ್ಯದರ್ಶಿ,ಇಬ್ಬರು ಜಂಟೀ ಕಾರ್ಯದರ್ಶಿಗಳು, ಇಬ್ಬರು ಉಪಾಧ್ಯಕ್ಷರು ಹಾಗು ಒಬ್ಬ ಖಜಾಂಚಿ ಎಂಬಂತೆ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆ ಮಾಡಲಾಯಿತು.

            ಹಲವಾರು ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರಲು ೭ ಕಾರ್ಯಕಾರಿ ಸಮಿತಿಗಳನ್ನು ಆಯೋಜಿಸಲಾಯಿತು. ಪದವಿ ಪೂರ್ವ-ಪದವೀಧರ ವಿದ್ಯಾರ್ಥಿಗಳ ಸಮಿತಿ, ಶಾಲಾವಿದ್ಯಾರ್ಥಿಗಳ ಸಮಿತಿ, ಶಿಕ್ಷಕವರ್ಗದ ಸಮಿತಿ, ಎಸಿ೩ ಸಮಿತಿ, ದಿನಚರಿ ಹೊತ್ತಿಗೆ ಹಾಗು ವೆಬ್ಸೈಟ್  ಸಮಿತಿ, ಸ್ಥಾನೀಯಕರಣಾ ಸಮಿತಿ ಹಾಗು ಕಚೇರಿ ನಿರ್ವಹಣಾ ಸಮಿತಿಗಳನ್ನು ಕಾರ್ಯರೂಪಕ್ಕೆ ತರಲಾಯಿತು. ಪ್ರತಿಯೊಂದು ಸಮಿತಿಯ ಜವಾಬ್ದಾರಿಯನ್ನು ಕಾರ್ಯಾಂಗ ಸಮಿತಿಯ ಒಬ್ಬರು ವಹಿಸಿಕೊಂಡರು.

            ಡಾ|| ಚಿದಾನಂದ ಗೌಡರು, ಬರಗೂರು ರಾಮಚಂದ್ರಪ್ಪ ಮತ್ತು ಚಂದ್ರಶೇಖರ ಕಂಬಾರರನ್ನು ಒಳಗೊಂಡ ಸಲಹಾ ಮಂಡಲಿಯನ್ನು ಕಾರ್ಯಕಾರಿ ಸಮಿತಿಯು ಒಪ್ಪಿ ಅಂಗೀಕರಿಸಿತು. ಕೊನೆಯದಾಗಿ, ಪ್ರಚಲಿತ ವಿಕಿ ಲೀಕ್ಸ್ ವಿರುದ್ಧದ ಆಂದೋಲನ, ಜೂಲಿಯನ್ ಅಸ್ಸಾಂಜ್ ಮೇಲಾಗುತ್ತಿರುವ ಅನೀತಿ,ಅನ್ಯಾಯ ಹಾಗು ತಾರತಮ್ಯತೆಯ ವಿರುದ್ಧ ಎದ್ದು ನಿಲ್ಲುವ ದಿಟ್ಟಗ್ರಹಣೆ ಹೊಂದಿದ್ದ ಸಭೆಯ ಸದಸ್ಯರು ವಿಕಿಲೀಕ್ಸ್ ಪರ ಕ್ರಾಂತಿಯನ್ನು ಸಂಘಟಿಸಲು ಪಣತೊಟ್ಟರು.
-ಶಿಶಿರ್ ಬಿಂಡಿಗನವಿಲೆ ಶ್ರೀಧರ್

೮೧೦೫೫೮೫೯೦೧

ಸದಸ್ಯ,ಸ್ವತಂತ್ರ್ಯ ತಂತ್ರಾಂಶ ಕ್ರಾಂತಿ, ಕರ್ನಾಟಕ