ಇಡೀ ಜಗತ್ತು ವಾನ್ನಾ ಕ್ರೈ ಆಕ್ರಮಣದ ನಂತರ ತಲ್ಲಣದಲ್ಲಿದೆ. ತಾಂತ್ರಿಕ ನಿಪುಣರು ಪರಿಸ್ಥಿತಿ ತಮ್ಮ ನಿಯಂತ್ರಣದಲ್ಲಿದೆ ಎಂದು ಹೇಳುತ್ತಿದ್ದರು ಕೂಡ ಯಾವುದೇ ಕ್ಷಣದಲ್ಲಿ ಇಂತಹ ಆಕ್ರಮಣ ಮತ್ತೊಮ್ಮೆ ಆಗಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ವರದಿಗಳ ಪ್ರಕಾರ, ವಾನ್ನಾ ಕ್ರೈ ವೈರಸ್ ಅಥವಾ ರಾನ್ಸಂವೇರ್ ಸುಮಾರು ೧೫೦ ದೇಶಗಳಲ್ಲಿ ೨೩೦೦೦೦ ಗಣಕಯಂತ್ರಗಳ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದೆ. ಈ ಆಕ್ರಮಣದಿಂದ ಅತ್ಯಂತ ಪರಿಣಾಮವನ್ನು ಎದುರಿಸಿರುವುದು ಅಮೆರಿಕಾದ ನೌಕಾ ಕಂಪನಿಗಳು ಮತ್ತು ಯುನೈಟೆಡ್ ಕಿಂಗ್ಡಮ್ಮಿನ ಅನೇಕ ಆರೋಗ್ಯ ಸೇವಾ ಸಂಸ್ಥೆಗಳು. ಈ ಆಕ್ರಮಣದ ಪ್ರಭಾವ ಭಾರತ ಮೇಲೆ ಅನ್ಯ ದೇಶಗಳ ಹೋಲಿಕೆಯಲ್ಲಿ ಅಲ್ಪ ಮಾತ್ರ ಎಂದು ಹೇಳಲಾಗಿದೆ.

ಏನಿದು ರಾನ್ಸಂವೇರ್ (ರೇನ್ಸಂವೇರ್ - ನಿಮ್ಮ ದತ್ತಾಂಶಗಳ ಬಿಡುಗಡೆಗಾಗಿ ಸುಂಕ ಕೇಳುವುದು) ? ರಾನ್ಸಂವೇರ್ ಒಂದು ದುರುದ್ದುದೇಶಪೂರಿತ ಗಣಕಯಂತ್ರ ಪ್ರೋಗ್ರಾಮ್. ಅದು ಗಣಕಯಂತ್ರದ ಮತ್ತು ಮೊಬೈಲುಗಳ ಕಡತವನ್ನು ಲಿಪ್ಯಂತರ (encryption- ನಿಮ್ಮ ಡಾಟಾವನ್ನು ನಿಮ್ಮ ಕಂಪ್ಯೂಟರ್ ಗೆ ಅರ್ಥವಾಗದ ಭಾಷೆಗೆ ಭಾಷಾಂತರಿಸುವುದು ) ಮಾಡಿ ಅವನ್ನು ಕೆಲಸಕ್ಕೆ ಬಾರದ ವಸ್ತುಗಳಾಗಿ ಉತ್ಪಾದಿಸುತ್ತದೆ. ಅವಗಳನ್ನು ಮರು ಲಿಪ್ಯಂತರ ಮಾಡಿ ಉಪಯೋಗಿಸಬೇಕೆಂದರೆ, ಆಕ್ರಮಣ ಮಾಡಿದ ಮಂದಿ ಕೇಳುವಷ್ಟು ಹಣ ನೀಡಬೇಕಾಗುತ್ತದೆ. ಈ ವಾನ್ನಾಕ್ರೈ ಆಕ್ರಮಣ ನೆಡೆಸಿರುವ ಮಂದಿ ಒಂದು ಕಡತವನ್ನು ಮರು ಲಿಪ್ಯಂತರ ಮಾಡಲು ಸುಮಾರು ೩೦೦ರಿಂದ ೫೦೦ ಡಾಲರ್ ಬಿಟ್ ಕಾಯಿನ್ ಹಣವನ್ನು ಕೇಳುತ್ತಿದ್ದಾರೆ(ಸುಮಾರು 20000 ರಿಂದ 32000 ರುಪಾಯಿ).

ವಾನ್ನಾಕ್ರೈ ರಾನ್ಸಂವೇರ್ ಎಂದರೇನು? ಮೈಕ್ರೊಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ಮನ್ನು ಆಕ್ರಮಿಸುವ ರಾನ್ಸಂವೇರಿನ ಹೆಸರು ವಾನ್ನಾಕ್ರೈ. ಇದನ್ನು ಬಳಸಿ ಶುಕ್ರವಾರ, ೧೨ ಮೇ ೨೦೧೭ರಂದು ರಾನ್ಸಂವೇರ್ ಆಕ್ರಮಣವನ್ನು ನೆಡೆಸಲಾಗಿತ್ತು. ಇದು ಆಕ್ರಮಣ ನೆಡೆಸುವಾಗ ವಾನ್ನಾಕ್ರಿಪ್ಟ್, ವಾನ್ನಾಕ್ರೈ, ವಾನ್ನಾಕ್ರಿಪ್ಟರ್, ಡಬ್ಲ್ಯುಕ್ರಿಪ್ಟ್, ಡಬ್ಲ್ಯುಕ್ರೈ ಹೀಗೆ ಹಲವಾರು ಹೆಸರುಗಳನ್ನು ಬಳಸುತ್ತದೆ. ಆಕ್ರಮಣಕಾರರು ಮೈಕ್ರೊಸಾಫ್ಟ್ ಎಸ್ ಎಮ್ ಬಿ ಪ್ರೊಟೋಕಾಲಿನಲ್ಲಿದ್ದ (ಎಮ್ ಬಿ ಪ್ರೊಟೋಕಾಲ್-ಸರ್ವರ್ ಮತ್ತು ಕ್ಲೈಂಟ್ ಗಣಕಯಂತ್ರಗಳು ಪರಸ್ಪರ ದತ್ತಾಂಶ ಹಂಚಿಕೆಗೆ ಬಳಸುವ ತಂತ್ರಾಂಶ) ಲೋಪವೊಂದನ್ನು ಬಳಸಿ ಈ ಪ್ರೋಗ್ರಾಮನ್ನು ಬೇರೆ ಗಣಕಯಂತ್ರಗಳಿಗೆ ಹರಡುವಂತೆ ಮಾಡಿದರು. MS17-010 ಸೆಕ್ಯೂರಿಟಿ ಪ್ಯಾಚ್ ಇಲ್ಲದ, ವಿಂಡೋಸ್ ೧೦ಕ್ಕಿಂತ ಹಳೆಯ ಆವೃತ್ತಿಗಳನ್ನು ಬಳಸುತ್ತಿರುವ ಎಲ್ಲ ಗಣಕಯಂತ್ರಗಳು ಈ ಆಕ್ರಮಣಕ್ಕೆ ತುತ್ತಾಗಬಹುದು.

ಇಂತಹ ಆಕ್ರಮಣಗಳನ್ನು ತಡೆಯುವುದು ಹೇಗೆ?

೧) ತಕ್ಷಣವೇ ಮೈಕ್ರೊಸಾಫ್ಟ್ ಬಿಡುಗಡೆಗೊಳಿಸಿರುವ MS17-010 ಸೆಕ್ಯೂರಿಟಿ ಪ್ಯಾಚ್ ಬಳಸಿ ನಿಮ್ಮ ಗಣಕಯಂತ್ರಗಳನ್ನು ನವೀಕರಿಸಿಕೊಳ್ಳಿ..

೨) ನಿಮ್ಮ ಫಯರ್ವಾಲಿನ್ನಲ್ಲಿ ೩೯, ೪೪೫ ಮತ್ತು ೩೩೮೯ ಪೋರ್ಟ್ ಸಂಖ್ಯೆಗಳನ್ನು ಬ್ಲಾಕ್ ಮಾಡಿ.

೩) ಮಾಹಿತಿಜಾಲವನ್ನು ಬಳಸುವಾಗ ಅಪರಿಚಿತ ಕೊಂಡಿಗಳನ್ನು ಬಳಸದಿರಿ.

೪) ಅಪರಿಚಿತರಿಂದ ಬಂದ ಇಮೇಲ್ ಆಟ್ಯಾಚ್ಮೆಂಟುಗಳನ್ನು (ಅಂಟಿಕೆಗಳನ್ನು) ತೆರೆಯದಿರಿ.

೫) ವಿಂಡೋಸ್ ಬಳಸುತ್ತಿದ್ದರೆ ಎಸ್ ಎಮ್ ಬಿಯನ್ನು ಡಿಸೇಬಲ್ ಮಾಡಿ.

೬) ನಿಮ್ಮ ಬ್ರೌಸರಿನಲ್ಲಿ ಪಾಪಪ್ ಬ್ಲಾಕರನ್ನು ಆಳವಡಿಸಿ.

೭) ನಿಮ್ಮೆಲ್ಲ ಮಾಹಿತಿಯನ್ನು ಕಾಲಕಾಲಕ್ಕೆ ಬ್ಯಾಕಪ್ ಮಾಡಿ ಹಾಗು ಕ್ಲೌಡ್ ಸಂಗ್ರಹಣಾ ವ್ಯವಸ್ಥೆಗಳಲ್ಲಿ ಸಂಗ್ರಹಿಸಿ.

ಇದಕ್ಕೆ ಶಾಶ್ವತ ಪರಿಹಾರ ಏನು? ಒಂದು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕಾದರೆ ಆ ಸಮಸ್ಯೆಯ ಮೂಲವನ್ನು ತಿಳಿಯಬೇಕು. ಎಲ್ಲ ರೀತಿಯ ಆಕ್ರಮಣಗಳನ್ನು ತಡೆಹಿಡಿಯುವ ಮತ್ತು ಯಾವುದೇ ಲೋಪ ಅಥವಾ ನ್ಯೂನತೆಗಳಿರದ ತಂತ್ರಾಂಶವೊಂದನ್ನು ಬರೆಯುವುದು ಅಸಾಧ್ಯ. ಆದರೆ ಒಂದು ತಂತ್ರಾಂಶದ ಮೂಲಸಂಕೇತಗಳು (source code) ಸಾರ್ವಜನಿಕ ಪರೀಕ್ಷೆಗೆ ಒಳಪಡುವಂತ್ತಿದ್ದರೆ ಅದರ ಲೋಪಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಆಷ್ಟೇ ಅಲ್ಲ ಆ ಲೋಪವನ್ನು ಆಕ್ರಮಣಕಾರರು ಬಳಸುವ ಮುನ್ನವೇ ಸರಿಪಡಿಸಬಹುದು. ಆದ್ದರಿಂದಲೇ ಮೂಲಸಂಕೇತಗಳು ಸಾರ್ವಜನಿಕವಾಗಿ ಲಭ್ಯವಿರದ ಮೈಕ್ರೊಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಂನಂತಹ ಮಾಲೀಕತ್ವದ ತಂತ್ರಾಂಶಗಳ ಮೇಲೆ ಇಂತಹ ಅನೇಕ ಆಕ್ರಮಣಗಳು ಬಹುತೇಕವಾಗಿ ನೆಡೆಯುತ್ತಿದೆ. ಯಾವಾಗ ಬಳಕೆದಾರನಿಗೆ ತಾನು ಬಳಸುತ್ತಿರುವ ತಂತ್ರಾಂಶದ ಮೇಲೆ ಹಿಡಿತವಿರುವುದಿಲ್ಲವೋ ಆಗ ತಂತ್ರಾಂಶಗಳು ಬಳಕೆದಾರನ ಮೇಲೆ ಹಿಡಿತ ಸಾಧಿಸುತ್ತವೆ. ಇದರಿಂದ ಮತ್ತೋರ್ವನು ನಿಮ್ಮ ಗಣಕಯಂತ್ರ ಅಥವಾ ನಿಮ್ಮ ಸ್ಮಾರ್ಟ್ ಫೋನಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ನಿಮಗೆ ತೊಂದರೆ ಮಾಡಬಹುದು. ಆದರೆ ಸ್ವತಂತ್ರ ತಂತ್ರಾಂಶ ಬಳಸಿದರೆ ಹಾಗಾಗುವುದಿಲ್ಲ, ಬಳಕೆದಾರನಿಗೆ ತಂತ್ರಾಂಶದ ಮೇಲೆ ಸಂಪೂರ್ಣ ಹಿಡಿತವಿರುತ್ತದೆ ಏಕೆಂದರೆ ಈ ತಂತ್ರಾಂಶದ ಮೂಲ ಸಂಕೇತಗಳನ್ನು ಯಾರು ಬೇಕಾದರು ನೋಡಬಲ್ಲರು. ಇದರಿಂದಾಗಿ ಇದರ ನ್ಯೂನತೆಗಳನ್ನು ಪತ್ತೆ ಹಚ್ಚುವುದು ಬಲು ಸುಲಭ. ಅಲ್ಲದೇ ಇದರ ಬಳಕೆದಾರರ ಹಾಗು ಡೆವಲಪರುಗಳ ಒಂದು ಬಹು ದೊಡ್ಡ ಸಮೂಹವೇ ಇರುವುದರಿಂದ ಲೋಪಗಳನ್ನು ಪತ್ತೆಹಚ್ಚಿ ಸರಿಪಡಿಸುವ ಕಾರ್ಯ ಕ್ಷಿಪ್ರವಾಗಿ ಮಾಡಬಹುದಾಗಿದೆ. ಇದರಿಂದಲೇ ಸ್ವತಂತ್ರ ತಂತ್ರಾಂಶ ಬೇರೆ ಮಾಲೀಕತ್ವದ ತಂತ್ರಾಂಶಗಳಿಗೆ ಹೋಲಿಸಿದರೆ ಹೆಚ್ಚು ಸುಭದ್ರತೆಯನ್ನು ಹೊಂದಿರುತ್ತದೆ.

ಇಂದಿನ ಗ್ನು/ಲಿನಕ್ಸ್ ಸ್ವತಂತ್ರ ಆಪರೇಟಿಂಗ್ ಸಿಸ್ಟಂಗಳು ಆಧುನಿಕ ತಂತ್ರಾಂಶಗಳಷ್ಟೇ ಹೊಂದಿರದೆ ಬಳಕೆದಾರನಿಗೆ ಸುಗಮವಾಗಿ ಬಳಸುಬಹುದಾದಂತ ಸಾಧನಗಳನ್ನು ನೀಡುತ್ತದೆ. ಉದಾಹರಣೆಯಾಗಿ ಉಬುಂಟು, ಲಿನಕ್ಸ್ ಮಿಂಟ್, ಡೆಬಿಯನ್ ಕೆಲವು ಪ್ರಸಿದ್ಧ ಆಪರೇಟಿಂಗ್ ಸಿಸ್ಟಂಗಳಾಗಿವೆ. ಹಾಗು ಇವೆಲ್ಲವಕ್ಕು ಉತ್ತಮ ಸಮುಹ ಸಹಾಯ ಕೂಡ ಲಭ್ಯವಿದೆ. ನೀವು ಗೌಪ್ಯತಾ ಅಥವಾ ಮಾಲೀಕತ್ವ ತಂತ್ರಾಂಶಗಳನ್ನು ತ್ಯಜಿಸಿ ಸ್ವತಂತ್ರ ತಂತ್ರಾಂಶಗಳ ಬಳಕೆಗೆ ವಲಸೆಹೋಗುವ ನಿರ್ಧಾರ ಮಾಡುವುದರಿಂದ ನಿಮ್ಮ ಗಣಕಯಂತ್ರಗಳನ್ನು ಸುಭದ್ರಗೊಳಿಸುವುದಷ್ಟೆ ಅಲ್ಲ, ಹಂಚಿಕೊಳ್ಳುವ ಮತ್ತು ಸಹಯೋಗ ಸಂಸ್ಕೃತಿಯಲ್ಲಿ ನಂಬಿಕೆಯುಳ್ಳ ಜಾಗತಿಕವಾದ ಒಂದು ಸಮೂಹದ ಭಾಗಿಯಾಗುತ್ತೀರಿ. ಈ ಸಮೂಹಕ್ಕೆ ನಿಮಗೆ ಸ್ವಾಗತ!

ಇಲ್ಲಿ ಎನ್ ಎಸ್ ಎ ಪಾತ್ರವೇನು?

ವಾನ್ನಾಕ್ರೈ ರಾನ್ಸಂವೇರ್ ಅನ್ನು ಜಾಲಬಂಧಗಳಲ್ಲಿ ಹಬ್ಬಲು ಮೈಕ್ರೊಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ಮಿನ “ಸರ್ವರ್ ಮೆಸೇಜ್ ಬ್ಲಾಕ್” ಎಂಬ ಪ್ರೋಟೊಕಾಲಿನಲ್ಲಿದ ನ್ಯೂನತೆಯೊಂದನ್ನು ಬಳಸಿಕೊಳ್ಳಲಾಗಿದೆ. ಹಿಂದಿನ ತಿಂಗಳಷ್ಟೇ ಅಮೇರಿಕಾದ ಭದ್ರತಾ ಸಂಸ್ಥೆಯಾದ ಎನ್ ಎಸ್ ಎ ಅಭಿವೃದ್ಧಿಪಡಿಸಿದ “ಎಟರ್ನಲ್ ಬ್ಲೂ” ಎಂಬ ತಂತ್ರಾಂಶ ಇದೇ ಲೋಪವನ್ನು ಬಳಸಿ ಖಾಸಗಿ ಮಾಹಿತಿ ಸೋರಿಕೆ ಮಾಡುತ್ತಿದೆ ಎಂದು ಮಾಧ್ಯಮಗಳಲ್ಲಿ ಬಹಿರಂಗ ಪಡಿಸಲಾಗಿತ್ತು. ವಾನ್ನಾಕ್ರೈ ಕೂಡ ಇದೇ ತಂತ್ರಾಂಶವನ್ನು ಬಳಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಅಮೇರಿಕಾದ ಭದ್ರತಾ ಸಂಸ್ಥೆ ಎನ್ ಎಸ್ ಎ ಮತ್ತು ಅಮೇರಿಕನ್ ಐಟಿ ದಿಗ್ಗಜರ ನಡುವಿನ ಈ ಅಪವಿತ್ರ ಮೈತ್ರಿ ರಹಸ್ಯವಾಗೇನು ಉಳಿದಿಲ್ಲ. ಭದ್ರತಾ ನಿಪುಣ ಎಡ್ವರ್ಡ್ ಸ್ನೊಡೆನ್ ಈ ರಹಸ್ಯ ಮೈತ್ರಿಯನ್ನು ಮೊದಲಿಗೆ ಹೊರಗೆಳದಿದ್ದ. ಅಮೇರಿಕನ್ ಐಟಿ ದಿಗ್ಗಜರ ನೆರವಿನಿಂದ ಎನ್ ಎಸ್ ಎ ತನ್ನದೇ ಪ್ರಜೆಗಳ ಮೇಲೆ ಬಹುದೊಡ್ಡ ರಹಸ್ಯ ಕಣ್ಗಾವಲು ಕಾರ್ಯಕ್ರಮ ನೆಡೆಸಿತ್ತು ಎಂದು ವಿಶ್ವಕ್ಕೆ ಬಯಲಾಯಿತು. ಆದ್ದರಿಂದ ಏನೇ ದೂರಗಾಮಿ ಪರಿಹಾರಗಳನ್ನು ಹುಡುಕಬೇಕಾದರೆ ಮುಕ್ತವಾದ, ರಹಸ್ಯ ಮೈತ್ರಿಗಳೊಳಪಡದ, ಸಾಮೂಹಿಕ ಚರ್ಚೆ ಹಾಗು ವೈಜ್ಞಾನಿಕ ಅಭಿವೃದ್ಧಿಗಳಾಗಬೇಕು. ಸ್ವತಂತ್ರ ತಂತ್ರಾಂಶಗಳನ್ನು ಅಭಿವೃಧ್ದಿಗೊಳಿಸಿದ್ದು ಹೀಗೆ ಅಲ್ಲವೇ!